ಜನಾಂಗವೊಂದು ಜನಾಂಗದಾಚೆಗೆ, ಪ್ರದೇಶವೊಂದು ಪ್ರದೇಶದಾಚೆಗೆ, ಹೋರಾಟವೊಂದು ಹೋರಾಟದಾಚೆಗೆ ವಿಸ್ತರಿಸಿಕೊಂಡ ಸೀಮಾತೀತತೆಯನ್ನು ಅನಾವರಣಗೊಳಿಸುತ್ತದೆ ಕಾದಂಬರಿ. ಇಲ್ಲಿ ಮೈವಡೆದಿರುವ ಹೋರಾಟ ಕೇವಲ ಕರಾವಳಿ ಕರ್ನಾಟಕದ್ದಲ್ಲ, ಅಖಂಡ ಭಾರತದ್ದು, ಅಸೀಮ ಜಗತ್ತಿನದು. ಏಕೆಂದರೆ ಸ್ವಾತಂತ್ರ‍್ಯದ ಸಂಗ್ರಾಮ ಕಾಲಾತೀತ ಹಾಗೂ ಸೀಮಾತೀತ. ಇದು ಭೂತದೊಳಗೆ ಮಣ್ಣಾಗಿ ಹೋಗಿರುವಂತೆಯೇ ವರ್ತಮಾನದೊಳಗೆ ಗುಪ್ತಗಾಮಿನಿಯಾಗಿ, ಭವಿಷ್ಯತ್ತಿನೊಳಗೆ ಕ್ಷೀರಪಥವಾಗಿ ಗೋಚರಿಸಬಲ್ಲದು. ವರ್ತಮಾನದಲ್ಲಿಯ ಜಗತ್ತಿನ ಯಾವುದೇ ಮೂಲೆಯಲ್ಲಿ ಜರುಗುತ್ತಿರುವ ಬಂಡಾಯದ ಕಹಳೆಯಿರಬಹುದು, ರೈತ ಹೋರಾಟಗಳಿರಬಹುದು, ಕಾರ್ಮಿಕರ ಪ್ರತಿಭಟನೆಗಳಿರಬಹುದು ಅಲ್ಲಿ ಸತ್ಯದ ಆಗ್ರಹವಿದ್ದರೆ ಖಂಡಿತವಾಗಿಯೂ ದಂಡಿ ಮುನ್ನಲೆಯಲ್ಲಿದ್ದಾನೆಂದೇ ಅರ್ಥ. ದಂಡಿ ಒಂದು ಐತಿಹಾಸಿಕ ಕಾದಂಬರಿಯಾಗಿದ್ದರೂ ಒಳನೋಟದಲ್ಲಿ ವರ್ತಮಾನದ ತಲ್ಲಣಗಳ ಸಂಕಥನವನ್ನೂ ಹಾಡುತ್ತಲೇ ಸಾಗುತ್ತದೆ. ದಂಡಿ ಕೇವಲ ಚರಿತ್ರೆಯ ಪಾತ್ರವಾಗಿರದೇ ವರ್ತಮಾನದ ಎಚ್ಚರವೂ ಆಗಿದ್ದಾನೆ. ಕಾದಂಬರಿಕಾರರೇ ಉಲ್ಲೇಖಿಸುವ ಹಾಗೆ " ಮಹಾತ್ಮಾ ಗಾಂಧೀಜಿ ಅವರಿಂದಾದಿಯಾಗಿ ಕರ್ನಾಟಕದ ಉತ್ತರ ಕನ್ನಡದ ಟಿ.ಎಸ್. ನಾಯಕ, ರಂಗನಾಥ ದಿವಾಕರ, ಡಾ. ಹರ್ಡೀಕರರ ರಾಷ್ಟ್ರೀಯ ಕಾಳಜಿಗಳು ಕಾದಂಬರಿಯ ನಾಯಕ ದಂಡಿಯಲ್ಲಿ ಸಮ್ಮಿಳಿತಗೊಂಡಿವೆ. ಅವರಂತೆಯೇ ಈ ನೆಲದ ಉಪ್ಪಿನ ಋಣವನ್ನು ತೀರಿಸಿದ ಧನ್ಯತೆಯನ್ನು ಅನುಭವಿಸುವುದೇ ನಮ್ಮ ನಾಯಕ ದಂಡಿಯ ಉದ್ಧೇಶ. ಈ ಅರ್ಥದಲ್ಲಿ ದಂಡಿ ಸರ್ವಕಾಲಕ್ಕೂ ಸಲ್ಲುವ ನಾಯಕ. ಈತನಿಗೆ ಭೂತದ ಹಂಗಿಲ್ಲ, ವರ್ತಮಾನದ ಬಂಧನವಿಲ್ಲ, ಮತ್ತು ಭವಿಷ್ಯದ ಮಿತಿ ಇಲ್ಲ."
ಭಾರತೀಯರಿಗೆ ಉಪ್ಪು ಸ್ವಾತಂತ್ರ‍್ಯದ ಸಂಕೇತವಾದಂತೆಯೇ ಹೋರಾಟ ಜೀವನದ ಧ್ಯೇಯವೂ ಆಗಿಹೋಯಿತು. ಭಾಷೆಯ ದೃಷ್ಟಿಯಿಂದ ಕರಾವಳಿ ಕನ್ನಡದ ಸೊಬಗನ್ನು ಇನ್ನೂ ಸ್ವಾರಸ್ಯಕರವಾಗಿ ಹೆಣೆಯಬಹುದಾಗಿತ್ತು. ಕಾದಂಬರಿಯ ಕಥಾಸಂವಿಧಾನವು ನೆಲಮೂಲ ಸಂಸ್ಕೃತಿಯೊಳಗೆ ರೂಪು ತಳೆದಿರಬಹುದಾದ ಕ್ರಾಂತಿಯ ಸ್ವರೂಪವನ್ನು ಆಲಂಗಿಸಿಕೊಂಡು ಕಸುವಿನಿಂದ ಕಂಗೊಳಿಸಿದೆ. ಪಾತ್ರ ವೈವಿಧ್ಯತೆ ಕಥೆಯ ಓಘಕ್ಕೆ ಮೆರಗನ್ನು ತಂದಿದೆ. ಚಳುವಳಿಯನ್ನೇ ತಮ್ಮ ಬದುಕನ್ನಾಗಿಸಿಕೊಂಡ ಶ್ಯಾನುಭೋಗ ಹಾಗೂ ರುಕ್ಮಿಣಿಬಾಯಿ ದಂಪತಿ, ನಾಗೇಶ ಹೆಗಡೆಯವರ ಪರಿವಾರ, ದೇಶಾವರಿಯನ್ನೇ ತಮ್ಮ ಉಸಿರನ್ನಾಗಿಸಿಕೊಂಡ ವಿನಾಯಕ ಭಟ್ಟರು ಹಾಗೂ ವಸುಧೆ, ಚಳುವಳಿಯಲ್ಲಿ ಏನೆಲ್ಲವನ್ನು ಕಳೆದುಕೊಂಡರೂ ಏನೂ ಆಗಿಲ್ಲವೆಂಬಂತೆ ಚೈತನ್ಯದ ಸೇವೆಯನ್ನು ಸಲ್ಲಿಸುವ ಬೊಮ್ಮ, ರಾಕರು, ಸತ್ಯಾಗ್ರಹಕ್ಕಾಗಿ ಸದಾ ಸಿದ್ಧರಾಗಿರುವಂತೆ ಕಾಯುತ್ತಿದ್ದ ರಾಯನಗೌಡ ಮತ್ತು ಸೋಮ್ನಿ, ನಾಗೇಶ ಹೆಗಡೆಯವರ ಅಪಾರ ನಿಧಿಯನ್ನು ರಕ್ಷಿಸಿ ತಾನುಂಡ ಉಪ್ಪಿನ ಋಣವನ್ನು ವಿಭಿನ್ನ ಬಗೆಯಲ್ಲಿ ತೀರಿಸಿ ಮಹಾತ್ಮನಿಂದ ನಮಿಸಲ್ಪಟ್ಟ ಹಸಲರದೇವಿ ಹೀಗೆ ಕರಾವಳಿಯ ನೆಲದ ಹೋರಾಟದ ಪ್ರತಿಮೆಗಳಂತೆ ಮೈತಳೆದು ನಿಂತ ಪಾತ್ರವೈವಿಧ್ಯತೆ ಕಾದಂಬರಿಯನ್ನು ದೃಶ‍್ಯಕಾವ್ಯವಾಗಿಸಿವೆ. ಅರಿತು ನೋಡಿದರೆ ಇವರೆಲ್ಲರೂ ಆಧುನಿಕ ಜಗತ್ತಿನ ಹೋರಾಟಗಳಲ್ಲಿನ ಪ್ರತಿನಿಧಿಗಳೇ ಆಗಿರುವುದನ್ನು ನಾವು ಮನಗಾಣಬಹುದು. ಬಸವಣ್ಣನವರು
ತಮ್ಮ ವಚನವೊಂದರಲ್ಲಿ ಅದಂದೇ ಹುಟ್ಟಿತ್ತು ಅದಂದೇ ಹೊಂದಿತ್ತು ಎಂದು ಹಾಡಿದಂತೆ ದಂಡಿಯೂ ಅಂದೇ ಹುಟ್ಟಿ
ಅಂದೇ ಯಶಸ್ವಿಯಾಗಿ ಅಂತ್ಯವಾದಂತೆನಿಸಿದರೂ ಕೂಡ ಅದು ಜಗದ ಒಡಲೊಳಗೆ ನಿರಂತವರಾಗಿ ಜರುಗುತ್ತಿರುವ ಸಂಘರ್ಷದ ಪ್ರತಿಮೆಯಾಗಿಯೂ
ನಿಲ್ಲುವ ಕಾಣ್ಕೆಯನ್ನು ಹೊಂದಿದೆ. ಪಾತ್ರಗಳು ಅಂದಂದೇ ಹುಟ್ಟಿ ಅಂದಂದೇ ಮುಗಿದಿದ್ದರೂ ಹೋರಾಟ ಮಾತ್ರ ನಿರಂತರವಾಗಿರುತ್ತದೆ ಎಂಬ ಧ್ವನಿ ದಂಡಿಯ ಪಾತ್ರದ ಮೂಲಕ ಹೊರಹೊಮ್ಮಿಸುವಲ್ಲಿ ಕಾದಂಬರಿ ಯಶಸ್ವಿಯಾಗಿದೆ. ಸ್ವದೇಶಿ ಚಳುವಳಿ, ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಚಲೇಜಾವ್ ಚಳುವಳಿಗಳಂತಹ ಸ್ವಾತಂತ್ರ‍್ಯ ಪೂರ್ವ ಭಾರತದ ರೋಚಕ ಯಾತ್ರೆಯನ್ನು ತನ್ನದೇ ಶೈಲಿಯಲ್ಲಿ ತೆರದಿಡುವ ಕಾದಂಬರಿಯು ಬಾಪೂಜಿಯವರ ಅಂತರಂಗದ ಶೋಧನೆಯಾಗಿರುವ ಸತ್ಯಾಗ್ರಹವು ಹೇಗೆ ಮಾನವನ ಧರ್ಮವೇ ಆಗಿಹೋಯಿತೆನ್ನುವುದಕ್ಕೆ ದೃಷ್ಟಾಂತಗಳನ್ನೊದಗಿಸುತ್ತದೆ. ಸತ್ಯ, ಅಹಿಂಸೆ, ಹಾಗೂ ಶಾಂತಿ ಎಂಬ ತತ್ವಗಳು ಹೇಗೆ ಲಕ್ಷಾಂತರ ಜನರ ಬದುಕನ್ನು ಒಳಹೊಕ್ಕು ರೂಪಿಸಿದ ಮಂತ್ರವಾದವು ಎನ್ನುವುದರ ನಿರೂಪಣೆ ಕಾದಂಬರಿಯ ಆಶಯಗಳನ್ನು ಇನ್ನಿಲ್ಲದಂತೆ ದೃಢೀಕರಿಸುತ್ತದೆ. ಸರ್ವರಿಗೂ ಸಮಬಾಳು ಎನ್ನುವ ಕುವೆಂಪುರವರ ಉಕ್ತಿಯು ಈ ಕಾದಂಬರಿಯ ಕತೆಯ ಹಿನ್ನೆಲೆಯಲ್ಲಿನ ಭಿತ್ತಿಯಾಗಿ ಗಮನಸೆಳೆಯುತ್ತದೆ. ಜಾತಿ ಮತ ಭೇದಗಳಿಲ್ಲದೇ ಎಲ್ಲರ ಜೀವನಾಡಿಯಾಗಿರುವ ಉಪ್ಪು ಸ್ವತಂತ್ರಪೂರ್ವ ಭಾರತದ ಅಸ್ಮಿತೆಯಾಗಿ ಹೇಗೆ ಜನರನ್ನು ಒಗ್ಗೂಡಿಸಲು ಕಾರಣವಾಯಿತೆನ್ನುವುದಕ್ಕೆ ದಂಡಿ ಉತ್ತರವಾಗಿ ನಿಲ್ಲುತ್ತದೆ. ಪ್ರಾದೇಶಿಕ ಸಂಸ್ಕೃತಿಯ ತಲ್ಲಣಗಳನ್ನೂ ಅಷ್ಟೇ ಆಪ್ತವಾಗಿ ಕಟ್ಟಿಕೊಡುವ ಕಾದಂಬರಿಯು ಏಕಕಾಲಕ್ಕೆ ವಿಶ್ವ ಸಂಸ್ಕೃತಿಗೂ ತನ್ನದೇ ಆದ ಕೊಡುಗೆಯನ್ನು ನೀಡುವಂತಿದೆ. ದಂಡಿ ಆಂಗ್ಲರ ವಿರುದ್ಧದ ಬಂಡಾಯದ ಕಥೆಯಾಗಿದ್ದರೂ ನಮ್ಮೊಳಗಿನ ವೈರಿಗಳ ವಿರುದ್ಧದ ಪ್ರತಿಭಟನೆಯಾಗಿಯೂ ಎದುರು ನಿಲ್ಲುತ್ತದೆ.
No comments:
Post a Comment