Total Pageviews
Tuesday, 24 July 2018
'ದರ್ಶನ'ದ ಬೆಳಕಿನಲ್ಲಿ.....(ಭಾಗ ೧)
ವಾಲ್ಮೀಕಿ ರಾಮಾಯಣ ನಮಗೆ ಏಕಮುಖವಾಗಿ ರಾಮನ ಉದಾತ್ತೀಕರಣವನ್ನು ಸಾರಿ ಅವನ ವ್ಯಕ್ತಿತ್ವವನ್ನು ದೈವತ್ವಕ್ಕೇರಿಸಿ ಉಳಿದ ಪಾತ್ರಗಳನ್ನು ಅವನಿಗೆ ಪೋಷಕವಾಗಿ ನಿಲ್ಲುವ ಆಶಯದ ಗ್ರಂಥವಾಗಿ ಕಂಡರೆ, ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕೃತಿ ರಾಮ ,ಲಕ್ಷ್ಮಣ,ಸೀತೆ,ರಾವಣರಿಂದ ಹಿಡಿದು ಮಂಥರೆ,ಶಬರಿ,ಊರ್ಮಿಳಾ ವರೆಗಿನ ಪ್ರತಿಯೊಂದು ಪಾತ್ರವೂ ಕೂಡ ಸೀತಾವಲ್ಲಭನಿಗೆ ಪೋಷಕವಾಗಿ ಮಾತ್ರ ನಿಲ್ಲುವುದಕ್ಕಿಂತ ತಮಗೆ ನ್ಯಾಯವಾಗಿ ಸಲ್ಲಬೇಕಾದ ಪ್ರಾಮುಖ್ಯತೆಯನ್ನು ಪಡೆದುಕೊಂಡು ಆತ್ಮೋನ್ನತಿಯ ಶಕ್ತಿಗಳಾಗಿ ರೂಪು ಪಡೆಯುತ್ತವೆ.ಇಲ್ಲಿ ಯಾರೂ ಮುಖ್ಯರಲ್ಲ ಹಾಗೂ ಅಮುಖ್ಯರಲ್ಲ ಸರ್ವರೂ ಇಲ್ಲಿ ಸಮಾನರು.ಕುವೆಂಪುರವರು ಹೇಳಿದ ಹಾಗೆ ' ಅನ್ನಮಯ ಪ್ರಪಂಚದಿಂದ ,ಆನಂದಮಯ ಪ್ರಪಂಚಕ್ಕೆ 'ಕರೆದೊಯ್ಯುವ ಕೃತಿಯಾಗಿ 'ಶ್ರೀ ರಾಮಾಯಣ ದರ್ಶನಂ' ಕನ್ನಡ ಸಾರಸ್ವತ ಲೋಕದಲ್ಲಿ ಅನುಪಮ ಸ್ಥಾನವನ್ನು ಪಡೆದು ರಾರಾಜಿಸುತ್ತಿದೆ. ಅರವಿಂದರು,ರಾಮಕೃಷ್ಣ ಪರಮಹಂಸರು,ರವೀಂದ್ರನಾಥ ಟ್ಯಾಗೋರರು ಮುಂತಾದ ದಾರ್ಶನಿಕರ ಪ್ರಭಾವಳಿ ಕುವೆಂಪುರವರ ಮನಭಿತ್ತಿಯಲ್ಲಿ ದಿವ್ಯಜ್ಞಾನದ ತೇಜೋಪುಂಜಗಳನ್ನು ಸೃಷ್ಟಿಸಿ ಶ್ರೀರಾಮಾಯಣ ದರ್ಶನಂ ಕಾವ್ಯದ ಮೂಲಕ ಜಗತ್ತಿಗೆ ಬೆಳಕನ್ನು ನೀಡುವ ದಿವ್ಯಜ್ಯೋತಿಯಾಗಿ ಸಹೃದಯರ ಎದೆಗಳಲ್ಲಿ ಎಂದೆಂದಿಗೂ ಪ್ರಕಾಶಮಾನವಾಗಿ ಹೊಳೆಯುತ್ತಿದೆ.ಈ ಕೃತಿಯನ್ನು ಕುವೆಂಪುರವರು ತಮ್ಮ ವಿದ್ಯಾಗುರುಗಳಾದ ಟಿ ಎಸ್ ವೆಂಕಣ್ಣಯ್ಯನವರಿಗೆ ಅರ್ಪಿಸಿದ್ದಾರೆ.ಕೃತಿಯ ಪ್ರಾರಂಭದ ಈ ಅರ್ಪಣೆಯು ವಿಶೇಷವಾಗಿದೆ.ಇದರ "ಕುವೆಂಪುವ ಸೃಜಿಸಿದ ಈ ಕೃತಿ "ಎಂಬ ಸಾಲಿನಲ್ಲಿ ಕುವೆಂಪು ಈ ಕೃತಿಯನ್ನು ಸೃಜಿಸಿದರು ಎಂಬುದಕ್ಕಿಂತ ಈ ಮಹಾಕಾವ್ಯ ಕುವೆಂಪುರವರನ್ನು ಸೃಷ್ಟಿಮಾಡಿತು ಎಂಬುದೇ ಹೆಚ್ಚು ಔಚಿತ್ಯಪೂರ್ಣವಾಗಿದೆ. ಕುವೆಂಪುರವರ ಮೇಲೆ ಪ್ರಭಾವ ಬೀರಿದ ಇಬ್ಬರು ಮಹಾಗುರುಗಳೆಂದರೆ ಎ ಆರ್ ಕೃಷ್ಣಶಾಸ್ತ್ರಿ ಹಾಗೂ ಟಿ ಎಸ್ ವೆಂಕಣ್ಣಯ್ಯ.ಪ್ರೀತಿಯ ಗುರುಗಳಾದ ಟಿ ಎಸ್ ವೆಂಕಣ್ಣಯನವರ ಪ್ರೇರಣೆಯಂತೆ ಈ ಮಹಾಕಾವ್ಯ ಜನ್ಮತಾಳಿತಾದರೂ ಮೊದಲ ಸಂಪುಟ ಪ್ರಕಟವಾದಾಗ ವೆಂಕಣ್ಣಯ್ಯನವರು ಅಲ್ಲಿರುವ ನಿಜದ ಮನೆಗೆ ಪಯಣ ಬೆಳೆಸಿದ್ದರು. ಅತ್ಯಂತ ಗೌರವಪೂರ್ವಕವಾಗಿ ಈ ಕೃತಿಯನ್ನು ಗುರುಗಳಾದ ಟಿ ಎಸ್ ವೆಂಕಣ್ಣಯ್ಯನವರಿಗೆ ಅರ್ಪಿಸಿದ ಕುವೆಂಪುರವರು "ನಿಮ್ಮ ಪ್ರೇರಣೆಯಂತೆ ಈ ಕಾವ್ಯ ರಚಿಸಿದ್ದು ನಿಮ್ಮ ವೈಕುಂಠದಲ್ಲಿರುವ ವಿದ್ವಾಂಸರಿಗೆಲ್ಲ ಈ ಕಾವ್ಯ ವಾಚನದ ಮೂಲಕ ಶ್ರೀರಾಮಾಯಣ ದರ್ಶನಂ ಪರಿಚಯಿಸಿ ಆಶೀರ್ವದಿಸಿ " ಎಂದು ವಿನಮ್ರತೆಯ ಗುರುಕಾಣಿಕೆ ನೀಡುತ್ತಾರೆ.
Subscribe to:
Post Comments (Atom)
ಚಹಾ ಮತ್ತು ನಾನು
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಭಾವಯಾನ 'ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ| ಎಳ್ಳು ಜೀರಿಗೆ ಬೆಳೆಯೋಳ |ಭೂಮಿತಾಯಿ ಎದ್ದೊಂದು ಘಳಿಗೆ ನೆನೆದೇನ' ಎಂದು ಹಾಡುವ ಜನಪದರು ಬೆಳಗಾಗೆದ...





ಒಳ್ಳೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೀರಿ,ಅದರ ಸವಿಯನ್ನು ಸಹೃದಯರಿಗೆ ಉಣ್ಣಿಸಿದ್ದೀರಿ.ಧನ್ಯವಾದಗಳು.
ReplyDelete