ಜಾನ್ ಕೀಟ್ಸ್ ನ ಮೌನರಾಗ.....(ಭಾಗ 2)

JOHN KEATS

JOHN KEATS
ಕೀಟ್ಸ್ ನಲ್ಲಿ ಕಾವ್ಯ ಪವಿತ್ರವಾಗಿತ್ತು,ದಿವ್ಯ ಬೆಳಕಾಗಿತ್ತು, ಮೌನದ ಮಹಾನದಿಯಾಗಿತ್ತು. ಚೈತನ್ಯದ ಚಿಲುಮೆಯಾಗಿತ್ತು.
''ಕೀಟ್ಸ್ ಅಲೆಮಾರಿಯಾಗಿದ್ದ ಕಾವ್ಯಕ್ಕಾಗಿ.
ಕೀಟ್ಸ್ ಖಿನ್ನನಾಗಿದ್ದ
ಕಾವ್ಯಕ್ಕಾಗಿ,
ಕೀಟ್ಸ್ ನಿಷ್ಠುರನಾಗಿದ್ದ ಕಾವ್ಯಕ್ಕಾಗಿ.
ಕೀಟ್ಸ್ ತಾಳ್ಮೆ ಕಳೆದುಕೊಂಡಿದ್ದ ಕಾವ್ಯಕ್ಕಾಗಿ.
ಕೀಟ್ಸ್ ಧ್ಯಾನಿಯಾಗಿದ್ದ ,
ಯೋಗಿಯಾಗಿದ್ದ,
ಪ್ರೇಮಿಯಾಗಿದ್ದ, ಮೌನಿಯಾಗಿದ್ದ, ಬಂಧುವಾಗಿದ್ದ,
ಜೀವದ ಗೆಳೆಯನಾಗಿದ್ದ,
ಹಂಬಲದ ಮಹಾ ಕೀಟವಾಗಿದ್ದ
ಕಾವ್ಯಕ್ಕಾಗಿ ''
''ಕೀಟ್ಸ್ ನ ಮತ್ತೊಂದು ಕಾವ್ಯ
ನನ್ನ ಆಕಾಶದ ಬಟ್ಟಲೊಳಗೆ
ಈ ವಸಂತವೆಲ್ಲ ಹೀರಿದರೂ
ಖಾಲಿಯಾಗದ ಶೆರೆ
ಮರೆಯಲಾಗದ್ದನ್ನು ಮರುಕಳಿಸಿಕೊಂಡು
ಕುಡಿಯುತ್ತಲೇ ಇದ್ದೇನೆ ಕಣ್ಣುಗಳಿಂದ
ಒಂಟಿಯಾಗಿದ್ದೇನೆ ಬಾ ಗೆಳೆಯ''
ಎಂದು ಸ್ನೇಹಕ್ಕೂ ಕಾವ್ಯದ ಸೇತುವೆಯನ್ನು ಕಟ್ಟುತ್ತಾನೆ.
I was never afraid of failure, for I would sooner fail than not be among the greatest. . ಎಂದು ತನ್ನ ಕವಿ ಸಾಧನೆಯ ಜೀವನವೇ ವಿಫಲವೆಂದು ಬಗೆದು, ಬಾಗಿದ, ಮಾಗಿದ ಮಹಾನುಭಾವ ಜಾನ್ ಕೀಟ್ಸ್.
ತನ್ನಲ್ಲಿ ಕಾವ್ಯವೊಂದು ಸೃಜಿಸದಿದ್ದಲ್ಲಿ ಹುಚ್ಚನಂತೆ ಚಡಪಡಿಸುತ್ತಿದ್ದ ಕೀಟ್ಸ್ ಮಗುವಾಗಿ ಹಠಕ್ಕೆ ಬೀಳುತ್ತಿದ್ದ. ಕಾವ್ಯದೊಂದಿಗೆ ಜಗಳವಾಡುತ್ತಿದ್ದ .ಮುನಿಸಿಗೆ ಇಳಿದ ಕಾವ್ಯ ಹೇಗೆ ತಾನೆ ಒಲಿದೀತು? ಸೋಲುತ್ತಿದ್ದ, ಪರಿತಪಿಸುತ್ತಿದ್ದ ಸಂಕಟ ಪಡುತ್ತಿದ್ದ. ಮತ್ತೊಮ್ಮೆ ಕಾವ್ಯ ಘಟಿಸುವ ಸಂಭ್ರಮದ ಮಳೆಗಾಗಿ, ಆ ಅಮೃತ ಘಳಿಗೆಗಾಗಿ, ಕಾಯುತ್ತಿದ್ದ. ಪ್ರಕೃತಿಯ ಮಡಿಲಲ್ಲಿ ಮಗುವಾಗಿ ವೀಣಾಪಾಣಿಯನ್ನು ಕಾವ್ಯಾರ್ಥಿಯಾಗಿ ಬೇಡುತ್ತಿದ್ದ. ಅಷ್ಟಾಗಿಯೂ ಒಲಿಯದಿದ್ದಾಗ, ಶೇಕ್ಸಪಿಯರ್ ನಂತಹ ಸಾಧಕರು ನಡೆದಾಡಿದ ತಾಣದಲ್ಲಿ ಕುಳಿತು ಧ್ಯಾನಿಸುತ್ತಿದ್ದ .ಕಾವ್ಯದೇವಿಯನ್ನು ಆಹ್ವಾನಿಸುತ್ತಿದ್ದ. ಬಹುಶಃ ಈ ಶ್ರಧ್ಧೆಯೇ ಅವನಲ್ಲಿ ಶ್ರೇಷ್ಠ ಕಾವ್ಯ ವಾಣಿಯಾಗಿ ಜನ್ಮ ತಳೆಯಿತು.ಅವನ ತನು ಮನ ನರ ನಾಡಿಯ ಕಣ ಕಣದಲ್ಲೂ ರುಧಿರದ ಬದಲಾಗಿ ಕಾವ್ಯವೇ ಜೀವಧಾರೆಯಾಗಿ,ಪ್ರಾಣ ವಾಯುವಾಗಿ ಪ್ರವಹಿಸುತ್ತಿತ್ತು .

RAGAM




ಆಂಗ್ಲ ಕಾವ್ಯ ಆರಾಧಕ ಕೀಟ್ಸ್ ಹಾಗೂ ಆ ಕವಿಯ ಬಗೆಗೆ ಪುಸ್ತಕ ಬರೆದ ರಾಗಂರವರು, ಅವರ ಪುಸ್ತಕವನ್ನು ವಿಮರ್ಶಾತ್ಮಕ ಪರಿಚಯಿಸಿದ ನೀವೂ ಸೇರಿದಂತೆ ಎಲ್ಲರೂ ಅಭಿನಂದನಾರ್ಹರು.
ReplyDelete