Total Pageviews
Saturday, 10 February 2018
Thursday, 8 February 2018
ಜಾನಪದ ಸಿಧ್ಧಿಯ ವರಕವಿ ಸಿದ್ದಣ್ಣ ಬಿದರಿ
ಜಾನಪದ ಸಿಧ್ಧಿಯ ವರಕವಿ ಸಿದ್ದಣ್ಣ ಬಿದರಿ
ಅನಕ್ಷರಸ್ಥರಾಗಿದ್ದರೂ ಮಾತನಾಡುತ್ತಲೇ ಆಡು ಭಾಷೆಯಲ್ಲಿ ಕಾವ್ಯಗಳನ್ನು ಕಟ್ಟುವ, ಸುಮಾರು ೬೦೦ ಕಾವ್ಯಗಳ ಸರಸ್ವತಿಯನ್ನೇ ತಮ್ಮ ನಾಲಗೆಯ ಮೇಲೆ ನಲಿಸುತ್ತಿರುವ ಅಗಾಧ ಜ್ಞಾಪಕ ಶಕ್ತಿ ಯ ಮೌಖಿಕ ಪರಂಪರೆಯ ಅಪ್ರತಿಮ ಆಶುಕವಿ ಶ್ರೀ ಸಿದ್ದಣ್ಣ ಸಾಬಣ್ಣ ಬಿದರಿ.ಬಾಗಲಕೋಟ ಜಿಲ್ಲೆಯ ಬೀಳಗಿಯವರಾದ ಬಿದರಿಯವರು ಕೃಷ್ಣಾ ನದಿ ತೀರದ ಗ್ರಾಮೀಣ ನೆಲಮೂಲ ಸಂಸ್ಕೃತಿ ಸತ್ವವನ್ನು ಹೀರುತ್ತಾ, ತಾನು ಜೀವನದ ನಿತ್ಯ ಸಂತೆಯಲ್ಲಿ ಕಂಡುಂಡ ಅನುಭವಗಳನ್ನೇ ಜನಪದರ ಭಾಷೆಯಲ್ಲಿ ಕಾವ್ಯವನ್ನಾಗಿ ಸೃಷ್ಟಿಸುವ ಜಾನಪದ ಗಾರುಡಿಗ .
ಕನ್ನಡ ಸಾರಸ್ವತ ಲೋಕದ 'ಮೇರು ಕವಿ', 'ಶಬ್ದಬ್ರಹ್ಮ ' ಬೇಂದ್ರೆ ಯವರ ಹೆಸರಿನಲ್ಲಿರುವ ಧಾರವಾಡದ "ದ ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ " ಪ್ರತಿವರ್ಷ, ಅವರ ಜನ್ಮದಿನವಾದ ಜನೇವರಿ ೩೧ ರಂದು ಕೊಡಮಾಡುವ ರಾಷ್ಟ್ರಮಟ್ಟದ ಪ್ರಶಸ್ತಿ ಈ ಬಾರಿ 'ಸಿದ್ದಣ್ಣ ಬಿದರಿ'ಯವರಿಗೆ ದೊರೆತಿರುವುದು ಔಚಿತ್ಯಪೂರ್ಣವಾದುದು ಹಾಗೂ ಅರ್ಥಪೂರ್ಣವಾದುದು. ಡಾ.ಮಲ್ಲಿಕಾ ಘಂಟಿ ಯವರು ಹೇಳಿದ ಹಾಗೆ
ಕವಿರಾಜಮಾರ್ಗಕಾರನ "ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳಿಗೆ" ಬಿದರಿಯವರು ಸಾಕ್ಷಿಯಾಗಿದ್ದಾರೆ.
ತಾವು ಕವಿಯಾದ ಬಗೆಯ ಕುರಿತು ಅವರನ್ನು ಮಾತನಾಡಿಸಿದಾಗ "ಜನ ನನ್ನನ್ನ ಎಲ್ಲೆಲ್ಲಿಗೆ ಕರೀತಾರ ಅಲ್ಲಿಗೆ ಹೊಕ್ಕೀನಿ. ಅವರ ಹಾಡಂತಾರ ನಾ ಹಾಡತೀನಿ.ಮತ್ತೊಂದು ಹಾಡಂತಾರ ಹಾಡತೀನಿ.ಖುಷಿಯಾಗ್ತಾರ.ಗೌರವ ಸಲ್ಲಿಸ್ತಾರ.ಸಂತೋಷ ಆಕ್ಕತಿ.ಹಿಂಗ ಅವರ ನನ್ ಕರದು ಕವಿ ಮಾಡ್ಯಾರ " ಎಂದು ಜನಪರ ಕಾವ್ಯವನ್ನು ಅಹಂಕಾರ ಮಾಡಿಕೊಳ್ಳದೆ ಕವಿಗಿರಬೇಕಾದ ವಿನಮ್ರತೆಯನ್ನು ಮೆರೆಯುತ್ತಾರೆ. ಕುಳಿತಲ್ಲಿ, ನಿಂತಲ್ಲಿ,ಕರೆದಲ್ಲಿ, ಕಾವ್ಯ ಕಟ್ಟುವ ಇವರ ಕಾವ್ಯ ಕಲೆ ಬೆರಗು ಮೂಡಿಸುವಂತಹುದು.
"ನಾನು ನೇಗಿಲಾ ಹೊಡದೀನಿ, ಬಿತ್ತಿ ಬೆಳದೀನಿ,ಕಣ ಮಾಡೀನಿ,ರಾಶಿ ಮಾಡೀನಿ, ಮಣ್ಣಿನ್ಯಾಗ ಅನ್ನ ಬೆಳದೀನಿ." ಎಂದು ಹೇಳಿಕೊಳ್ಳುವ ಸಿದ್ದಣ್ಣ ರು ಅಪ್ಪಟ ಮಣ್ಣಿನ ಸಂಸ್ಕೃತಿಯನ್ನೇ ತಮ್ಮ ಉಸಿರಾಗಿಸಿಕೊಂಡ ಗ್ರಾಮೀಣ ಪ್ರತಿಭೆ.
"ನಾನು ಚಿಂತಿ ಬೆಂಕ್ಯಾಗ ಸುಟ್ಟೀನಿ, ಪ್ರೀತಿ ಹೊಳ್ಯಾಗ ಈಜಾಡೀನಿ, ಕಷ್ಟ ಹಾಸಿ ಹೊತಗೊಂಡೀನಿ, ಏರುಪೇರು ಸಂಸಾರದೊಳಗ ಗೆದ್ದೀನಿ, ಸೋತೀನಿ." ಎನ್ನುವ ಇವರು ಜೀವನದ ಬೆಂಕಿಯಲ್ಲಿ ಬೆಂದ, ಪ್ರೀತಿಯ ಹೊಳೆಯಲ್ಲಿ ಮಿಂದ ಹಾಡುಗಬ್ಬದ ಮೋಡಿಗಾರ.
"ನಾಟಕ ಮಾಡೀನಿ.ಭಜನಾ ಪದ ಹಾಡೀನಿ.ಡೊಳ್ಳಿನ ಪದ ಹಾಡೀನಿ.ಗೀಗಿ ಪದ ಕೇಳಿನಿ.ಚೌಡಕಿ ಪದ ಹಾಡೀನಿ.ಸೋಬಾನ ಪದ ಕೇಳಿನಿ." ಎಂದು ತನ್ನ ಕವಿತೆಗೆ ಪ್ರೇರಣೆಯಾದ ಹಿನ್ನಲೆಯನ್ನು ಸ್ಮರಿಸಿಕೊಳ್ಳುತ್ತಾರೆ.
ಸಿದ್ದಣ್ಣ ಬಿದರಿ ಯವರ
'ಹೊಳಿ ಸಾಲ ಹೋರಿ ','ಹತ್ತೂನ ಬಾ ಪ್ರೀತಿಗಾಡಿ', 'ಅನುಭವದ ಗಡಿಗಿ','ಮಾತು ಮಾಣಿಕ್ಯ', 'ಮುಟ್ಟೋಣ ನೀಲಿ ಚುಕ್ಕಿ', 'ಕೆರೆಯ ನೀರನು ಕೆರೆಗೆ ಚೆಲ್ಲೀನಿ', 'ಬಿತ್ತೋಣ ಬಾ ಜಾತಿ ಮುತ್ತ' 'ಹತ್ತೈತೊ ಉರಿ', 'ನಮ್ಮ ದೇವ್ರು', 'ಇದ ನನ್ನ ಬದುಕು', 'ದೇವರ ಜಗಳ ', 'ಅಡವಿ ಮಲ್ಲಿಗಿ' ಮುಂತಾದ ೩೦ ಕ್ಕೂ ಹೆಚ್ಚು ಕಾವ್ಯ ಮಣಿ ಮಾಲೆಗಳು ಕನ್ನಡ ಸಾರಸ್ವತ ಲೋಕವನ್ನು ಅಲಂಕರಿಸಿ ಮೆರುಗನ್ನು ತಂದಿವೆ.
ಬಿದರಿಯವರ ಕಾವ್ಯಗಳಲ್ಲಿ ವ್ಯಕ್ತವಾಗುವ ಪ್ರೇಮದ ಭಾವ ತೀವ್ರತೆಯನ್ನು, ರಮಣೀಯತೆಯನ್ನು ಅವರ ಬಾಯಿಂದ ಕೇಳಿಯೇ ಸವಿಯಬೇಕು.
ಉದಾ : ಗೆ "ಹೇಳೀನ ನಿನಗ ಎಷ್ಟೋ ಬಾರಿ
ದೂರ ನಿಲ್ಲ ನೀ ಹೋದಾಡು ಪೋರಿ
ಮೇದ ನಿಂತೈತಿ ಹೊಳಿ ಸಾಲ ಹೋರಿ
ತಿರವ್ಯಾಡಿ ಹಾದರ ಹರಿದೀತ ಮಾರಿ"
( 'ಹೊಳಿಸಾಲ ಹೋರಿ' ಕವಿತೆಯಿಂದ)
Subscribe to:
Comments (Atom)
ಚಹಾ ಮತ್ತು ನಾನು
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಕುಲದ ನೆಲೆಯನರಸುತ್ತಾ.... ನಮ್ಮ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರಾದ ಡಾ.ಗುರುಲಿಂಗ ಕಾಪಸೆ ಯವರು " ಪಂಪ ರನ್ನ ರಂತಹ ವ...
-
ಚಹಾ ಮತ್ತು ನಾನು ದೂರವಾಗು ಎಂದರೆ ನಮ್ಮಿಬ್ಬರಿಗೂ ಸಾಧ್ಯವೇ ಪ್ರಿಯೆ ಪ್ರಾಣದಿಂದ ಬೇರೆಯಾದವರುಂಟೆ? ಕಾಣುವುದಿಲ್ಲ ಛಾಯೆ ಆತ್ಮದಿಂದ ಹೊರನಡೆದವರುಂಟೆ ? ನೀನೊಂದು ಮಾಯೆ ರಸ...
-
ಭಾವಯಾನ 'ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ| ಎಳ್ಳು ಜೀರಿಗೆ ಬೆಳೆಯೋಳ |ಭೂಮಿತಾಯಿ ಎದ್ದೊಂದು ಘಳಿಗೆ ನೆನೆದೇನ' ಎಂದು ಹಾಡುವ ಜನಪದರು ಬೆಳಗಾಗೆದ...







